ಹಿಮವದ್ಗೋಪಾಲಸ್ವಾಮಿಬೆಟ್ಟ

From Wikipedia

ಗೋಪಲಸ್ವಾಮಿ ಬೆಟ್ಟವು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿದೆ. ಮೈಸೂರಿನ ದಕ್ಷಿಣಕ್ಕೆ ಸುಮಾರು ೮೦ ಕಿ.ಮೀ. ದೂರದಲ್ಲಿ ಊಟಿ ಹೆದ್ದಾರಿಯ ಅಂಚಿನಲ್ಲಿರುವ ಈ ಬೆಟ್ಟವು ಅದ್ಭುತ ಪ್ರಕೃತಿ ಸೌಂದರ್ಯದ ತಾಣ. ಸಮುದ್ರಮಟ್ಟದಿಂದ ಸುಮಾರು ೧೪೪೦ ಮೀ. ಎತ್ತರದಲ್ಲಿ ಮಲೆಯ ಮೇಲೆ ಶ್ರೀಕೃಷ್ಣನ ದೇವಾಲಯವಿದೆ. ವರ್ಷದ ಎಲ್ಲಾಕಾಲದಲ್ಲೂ ತಂಪಾದ ಹವಾಗುಣವಿರುವ ಈ ಪ್ರದೇಶದಲ್ಲಿ ಮಳೆಗಾಲ ಹಾಗೂ ಚಳಿಗಾಲದಲ್ಲಿ ಸದಾ ಮಂಜುಮುಸುಕಿದ ವಾತಾವರಣ. ಮಂಜಿನ ಜೊತೆಗೆ ಮಳೆಯ ತುಂತುರು ಹನಿಗಳ ಮಧ್ಯೆ ಹಾಗೂ ವಾಸ್ತವವಾಗಿ ಮೋಡಗಳ ನಡುವೆಯೇ ನಡೆದಾಡಬೇಕಾದ ಸನ್ನಿವೇಶ ಇಲ್ಲಿ ಸಾಮಾನ್ಯ. ದೇವಾಲಯದ ಗರ್ಭಗುಡಿಯ ಬಾಗಿಲಿನ ಮೇಲ್ಭಾಗದಿಂದ ನಿರಂತರವಾಗಿ ಹಿಮದನೀರು ಜಿನುಗುತ್ತಿರುತ್ತದೆ. ಆದ್ದರಿಂದಲೇ ಹಿಮವದ್ಗೋಪಾಲಸ್ವಾಮಿ ಎಂಬ ಹೆಸರು ಇಲ್ಲಿಯ ದೇವನಿಗೆ. ಬೆಟ್ಟವನ್ನೇರುವ ರಸ್ತೆ ಬಲು ಕಡಿದು. ಮಲೆಯ ಮೇಲ್ಭಾಗದಿಂದ ಕಾಣಬರುವ ನೋಟ ಅಸದೃಶ. ಬಂಡಿಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿರುವುದರಿಂದ ಪ್ರವಾಸಿಗರಿಗೆ ಎಲ್ಲ ಕಡೆ ಮುಕ್ತವಾಗಿ ಓಡಾಡುವ ಅವಕಾಶವಿಲ್ಲ.