ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.21
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಬಿಗರ ಚೌಡಯ್ಯ
0
3521
325409
325408
2026-09-23T12:05:49Z
Mallesh u barki
8679
325409
wikitext
text/x-wiki
==ಅಂಬಿಗರ ಚೌಡಯ್ಯ==
12ನೆಯ ಶತಮಾನದ ಬಸವಣ್ಣನವರ ಕಾಲದ ಒಬ್ಬ ವಚನಕಾರ. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ. ಬಸವಣ್ಣನವರ ಅನುಭವಮಂಟಪದಲ್ಲಿ ಸಮಾನಭೂಮಿಕೆಯ ಸಮ್ಮೇಳನದಲ್ಲಿ ಸೇರಿಕೊಂಡವ. ತನ್ನ ಕಾಯಕ ಅಥವಾ ವ್ಯಕ್ತಿನಾಮವಾದ ಅಂಬಿಗರ ಚೌಡಯ್ಯ ಎಂಬುದೇ ಈತನ ವಚನಗಳ ಅಂಕಿತವಾಗಿದೆ. ತಾನು ಕೇವಲ ತುಂಬಿದ ಹೊಳೆಯಲ್ಲಿ ದೋಣಿಗೆ ಹುಟ್ಟುಹಾಕುವ ಅಂಬಿಗ ಮಾತ್ರವಲ್ಲ, ಭವಸಾಗರದಲ್ಲೂ ಹುಟ್ಟು ಹಾಕುವ ಕೌಶಲವುಳ್ಳವ ಎಂದು ಹೇಳಿಕೊಳ್ಳುವುದರಲ್ಲಿ ತನ್ನ ಅನುಭಾವದೃಷ್ಟಿಯನ್ನು ಪ್ರಕಟಿಸಿದ್ದಾನೆ ಶ್ರೀ ನಿಜಶರಣ ಅಂಬಿಗರ ಚೌಡಯ್ಯ.
ಉಳಿದ ವಚನಕಾರರ ವಚನಗಳಲ್ಲಿರುವಂತೆ ಇವನಲ್ಲಿಯೂ ಶಿವಾನುಭವಪರವಾದ ವಚನಗಳಿದ್ದರೂ ಅವುಗಳಲ್ಲಿ ಕಂಡುಬರುವ ಸಮಕಾಲೀನ ಸಮಾಜ ವಿಡಂಬನೆಯ ವ್ಯಗ್ರದೃಷ್ಟಿ ಬೇರೆಯವರಲ್ಲಿ ವಿರಳವೆಂದೇ ಹೇಳಬೇಕು. ಅವನ ವಚನಗಳ ವಸ್ತು, ಭಾಷೆ, ಶೈಲಿ ಗಮನಿಸಿದರೆ ಅವನೊಬ್ಬ ಕೆಚ್ಚೆದೆಯ, ನಿಷ್ಠುರಪ್ರಕೃತಿಯ, ಗ್ರಾಮ್ಯಮನೋಧರ್ಮದ ಒರಟು ವಚನಕಾರ ಎಂಬುದು ಸ್ಪಷ್ಟವಾಗುತ್ತದೆ. ಅವನು ನ್ಯಾಯನಿಷ್ಠುರ, ದಯಾದಾಕ್ಷಿಣ್ಯಪರನಲ್ಲ. ಯಾರನ್ನೇ ಆಗಲಿ ಯಾವುದನ್ನೇ ಆಗಲಿ ಅವನು ಟೀಕಿಸದೆ ಬಿಡುವುದಿಲ್ಲ. ಅವನು ಮೃದುವಾಗಿ ಮಾತನಾಡುವುದು ಅಪುರ್ವ; ಮಾತಿನ ಬಹುಭಾಗ ಹರಿತವಾದದ್ದು, ಸಂಸ್ಕಾರದೂರವಾದದ್ದು. ‘ಕೇಳಿರಯ್ಯ ಮಾನವರೇ’, ‘ಶೀಲದಲ್ಲಿ ಸಂಪನ್ನರಾದವರು ನೀವು ಕೇಳಿರೋ’, ‘ನನಗೊಬ್ಬರೆಂಜಲು ಸೇರದೆಂದು ಶುಚಿತನದಲ್ಲಿ ಬದುಕುವ ಬರಿಯ ಮಾತಿನ ಭುಂಜಕರು ನೀವು ಕೇಳಿರೋ’, ‘ಪರಪುರುಷಾರ್ಥವನರಿಯದೆ ಕೆಟ್ಟನರ ಕುರಿಗಳು ನೀವು ಕೇಳಿರೋ’ ಎಂದು ಆರಂಭವಾಗಿ ‘ಮೆಟ್ಟಿದ್ದ ದೊಡ್ಡ ಪಾದರಕ್ಷೆಯ ತಕ್ಕೊಂಡು ಲಟಲಟನೆ ಹೊಡೆಯೆಂದ’, ‘ಪಡಿಹಾರ ಉತ್ತಣ್ಣನ ಎಡಪಾದರಕ್ಷೆಯಿಂದ ಪಟಪಟನೆ ಹೊಡೆಯೆಂದ’, ‘ಮೂಗ ಕೊಯ್ದು ಇಟ್ಟಂಗಿಯ ಕಲ್ಲಿಲೆ ಸಾಸಿವೆಯ ತಿಕ್ಕಿ ಹಿಟ್ಟಿನ ತಳಿದು ಮೇಲೆ ನಿಂಬೆಯ ಹುಳಿಯನೆ ಹಿಂಡಿ ಪಡುವಲ ಗಾಳಿಗೆ ಹಿಡಿ’-ಹೀಗೆ ಮುಕ್ತಾಯವಾಗುತ್ತದೆ, ಇವನ ವಚನಗಳ ಶೈಲಿ. ಹಳೆಯ ಮತ್ತು ಹೊಸ ನಂಬಿಕೆ ಗಳ ಅವಸ್ಥಾಂತರದ ಅವ್ಯವಸ್ಥೆಯಲ್ಲಿದ್ದ ಅಂದಿನ ವೀರಶೈವ ಸಮಾಜದ ಲೋಪದೋಷಗಳನ್ನು ನಿರ್ದಾಕ್ಷಿಣ್ಯವಾಗಿ ಎತ್ತಿ ತೋರಿಸುವ ಶ್ರೀ ನಿಜಶರಣ ಅಂಬಿಗರ ಚೌಡಯ್ಯನ ಈ ವಚನಗಳು ಬಹುಶಃ ಅಂದಿನ ಸಾಮಾಜಿಕ ಆವಶ್ಯಕತೆಯ ಪರಿಣಾಮಗಳೆಂದು ನಾವು ಭಾವಿಸಬಹುದು. ನಿಜಶರಣ ಅಂಬಿಗರ ಚೌಡಯ್ಯನ ವಚನಗಳಿಂದ ನಮಗೆ ಕಂಡುಬರುವ ಸಮಾಜದ ಅವ್ಯವಸ್ಥೆಯ ಚಿತ್ರ, ಬೇರೆಯವರಲ್ಲಿ ನಮಗೆ ಇಷ್ಟರಮಟ್ಟಿಗೆ ಕಾಣದು. ಅವನ ವಚನಗಳಲ್ಲಿ ನಿಜಶರಣನ ಮೊರೆತದ ಜೊತೆಗೆ ಸುಧಾರಕನ ಕಟುಟೀಕೆಯೂ ಕೇಳಿಬರುತ್ತದೆ. ಅವನ ವಚನಗಳು ಅನರ್ಥ ಸಾಧಕವಾದ ಕೋಪದಿಂದ ಹೊಮ್ಮಿದುವಲ್ಲ; ಸದರ್ಥಸಾಧಕವಾದ ಸತ್ಕೋಪದಿಂದ ಹೊಮ್ಮಿರುವುವು. ಕನ್ನಡ ಸಾಹಿತ್ಯದಲ್ಲಿ ಈ ಬಗೆಯ ದಿಟ್ಟತನ, ವ್ಯಗ್ರತೆ ಕಂಡುಬರುವುದು ಬಹುಶಃ ಇಬ್ಬರಲ್ಲೇ ಎಂದು ತೋರುತ್ತದೆ. ಒಬ್ಬ ಸಿಡಿಲು ನುಡಿಯ ಸರ್ವಜ್ಞ; ಇನ್ನೊಬ್ಬ ಕೆಚ್ಚೆದೆಯ ವಚನಕಾರ ಶ್ರೀ ನಿಜಶರಣ ಅಂಬಿಗರ ಚೌಡಯ್ಯ.
[[:wikipedia:kn:ಅಂಬಿಗರ_ಚೌಡಯ್ಯ]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
mo18o96z7ihrm4vaatikji63fj0ebz5