Wikipedia:ವಿಶೇಷ ಬರಹ/ಸಂಚಿಕೆ - ೨೧
From Wikipedia
ಸರ್ದಾರ್ ವಲ್ಲಭಭಾಯ್ ಪಟೇಲ್ (ಅಕ್ಟೋಬರ್ ೩೧, ೧೮೭೫ - ಡಿಸೆಂಬರ್ ೧೫, ೧೯೫೦) ಭಾರತದ ಪ್ರಮುಖ ಗಣ್ಯರಲ್ಲಿ ಒಬ್ಬರು, ರಾಜಕೀಯ ಮುತ್ಸದ್ಧಿ - ಉಕ್ಕಿನ ಮನುಷ್ಯರೆಂದೇ ಪ್ರಖ್ಯಾತರಾದವರು. ಇವರು ಗಾಂಧೀಜಿಯವರ ಕೆಳಗೆ ಭಾರತದ ರಾಷ್ಟೀಯ ಕಾಂಗ್ರೆಸ್ನ ಮುಖ್ಯ ನಿರ್ವಾಹಕರಾಗಿದ್ದರು. ಇವರ ಪ್ರಯತ್ನಗಳಿಂದ ೧೯೩೭ರ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಜಯವನ್ನು ಸಾಧಿಸಿತು. ಮೂಲತಃ ಸರ್ದಾರ್ ಪಟೇಲ್ರವರೇ ಕಾಂಗ್ರೆಸ್ ಸದಸ್ಯರಿಂದ ಪ್ರಧಾನಿ ಹುದ್ದೆಗೆ ಆಯ್ಕೆಯಾಗಿದ್ದರಾದರೂ, ಗಾಂಧೀಜಿಯವರ ಒತ್ತಾಯದ ಮೇಲೆ ಪಟೇಲರು ಹಿಂದಕ್ಕೆ ಸರಿದು ಜವಾಹರ್ ಲಾಲ್ ನೆಹರುರವರಿಗೆ ದಾರಿ ಮಾಡಿಕೊಟ್ಟರು. ಗುಜರಾತಿನ ಜನರಿಂದ ಗೌರವಾರ್ಥ 'ಸರ್ದಾರ್' ಎಂಬ ಬಿರುದು ಪಡೆದರು. ಭಾರತದಲ್ಲಿದ್ದ ಪುಟ್ಟ ಪುಟ್ಟ ರಾಜರಿಂದಾಳಲ್ಪಟ್ಟ ರಾಜ್ಯಗಳನ್ನು ಒಂದುಗೂಡಿಸುವಲ್ಲಿ ಇವರು ವಹಿಸಿದ ಪ್ರಮುಖ ಪಾತ್ರ ಇತಿಹಾಸದ ಪುಟಗಳಲ್ಲಿ ಅಮರವಾಗಿದೆ. ಸರ್ದಾರ್ ಪಟೇಲರಿಗೆ ೧೯೯೧ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.