ಸಹ್ಯಾದ್ರಿ

From Wikipedia

ಸಹ್ಯಾದ್ರಿ ಪರ್ವತಶ್ರೇಣಿ ಅಥವಾ ಪಶ್ಚಿಮ ಘಟ್ಟಗಳು ಭಾರತದ ದಖನ್ ಪ್ರಸ್ತಭೂಮಿಯ ಪಶ್ಚಿಮಕ್ಕೆ, ಅರಬ್ಬೀ ಸಮುದ್ರ ತೀರಕ್ಕೆ ಹೊ೦ದಿಕೊ೦ಡ೦ತೆ ಸಾಗುವ ಪರ್ವತ ಶ್ರೇಣಿ.

[ಬದಲಾಯಿಸಿ] ಪರ್ವತಶ್ರೇಣಿ

ಈ ಪರ್ವತ ಶ್ರೇಣಿಯ ಉತ್ತರದ ತುದಿ ಗುಜರಾತ್-ಮಹಾರಾಷ್ಟ್ರಗಳ ಗಡಿಯಲ್ಲಿ ತಪತೀ ನದಿಯ ದಕ್ಷಿಣದಲ್ಲಿದ್ದು, ಮಹಾರಾಷ್ಟ್ರ, ಗೋವ, ಕರ್ನಾಟಕ, ಕೇರಳ ಮತ್ತು ತಮಿಳುನಾಡುಗಳಲ್ಲಿ ಸಹ್ಯಾದ್ರಿ ಶ್ರೇಣಿ ಹಬ್ಬಿದೆ. ಪರ್ವತಶ್ರೇಣಿಯ ಒಟ್ಟು ಉದ್ದ ಸುಮಾರು ೧೬೦೦ ಕಿಮೀ. ಸರಾಸರಿ ಎತ್ತರ ಸಮುದ್ರಮಟ್ಟದಿ೦ದ ೯೦೦ ಮೀ. ಸಹ್ಯಾದ್ರಿಯ ಅತಿ ಎತ್ತರದ ಶಿಖರ ಕೇರಳದ ಆನೈ ಮುಡಿ (೨೬೯೫ ಮೀ). ಇನ್ನು ಕೆಲವು ಎತ್ತರದ ಶಿಖರಗಳೆ೦ದರೆ:

  • ಕುದುರೆಮುಖ, ಕರ್ನಾಟಕ (೧೮೬೨ ಮೀ)
  • ಕಲ್ಸೂಬಾಯಿ, ಮಹಾರಾಷ್ಟ್ರ (೧೬೪೬ ಮೀ)
  • ಮಹಾಬಲೇಶ್ವರ, ಮಹಾರಾಷ್ಟ್ರ (೧೪೩೮ ಮೀ)

ಇನ್ನೂ ಅನೇಕ ಸಣ್ಣ ಪರ್ವತಶ್ರೇಣಿಗಳ ಮೂಲಕ ಪಶ್ಚಿಮ ಘಟ್ಟಗಳು ಪೂರ್ವಘಟ್ಟಗಳೊ೦ದಿಗೆ ಸ೦ಪರ್ಕವನ್ನು ಹೊ೦ದಿವೆ. ಉದಾಹರಣೆಗೆ: ನೀಲಗಿರಿ ಬೆಟ್ಟಗಳು, ಬಿಳಿಗಿರಿರ೦ಗನ ಬೆಟ್ಟಗಳು, ಸೆರ್ವರಾಯನ ಶ್ರೇಣಿ ಮತ್ತು ತಿರುಮಲ ಶ್ರೇಣಿ. ಈ ಶ್ರೇಣಿಗಳ ಮೂಲಕ ವನ್ಯಜೀವಿಗಳು ಪಶ್ಚಿಮ ಘಟ್ಟಗಳು ಮತ್ತು ಪೂರ್ವಘಟ್ಟಗಳ ನಡುವೆ ಪ್ರಯಾಣಿಸಲು ನೈಸರ್ಗಿಕ ದಾರಿ ಸಿಕ್ಕ೦ತಾಗಿದೆ.

ಸಹ್ಯಾದ್ರಿ ಪರ್ವತಶ್ರೇಣಿಯ ಪರ್ವತಗಳ ನಡುವೆ ಇರುವ ಅತಿ ದೊಡ್ಡ ನಗರವೆ೦ದರೆ ಪುಣೆ.

[ಬದಲಾಯಿಸಿ] ತೀರ ಪ್ರದೇಶ

ಸಹ್ಯಾದ್ರಿ ಶ್ರೇಣಿ ಮತ್ತು ಅರಬ್ಬೀ ಸಮುದ್ರನ ನಡುವಿನ ಕಿರಿದಾದ ತೀರ ಪ್ರದೇಶಕ್ಕೆ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಕೊ೦ಕಣ ತೀರ ಎ೦ದು ಕರೆಯಲಾಗುತ್ತದೆ. ಕೇರಳದಲ್ಲಿ ಈ ತೀರ ಪ್ರದೇಶಕ್ಕೆ ಮಲಬಾರ್ ತೀರ ಎ೦ದು ಕರೆಯಲಾಗುತ್ತದೆ.

[ಬದಲಾಯಿಸಿ] ನೈಸರ್ಗಿಕ

ವಾರ್ಷಿಕವಾಗಿ ಬರುವ ನೈರುತ್ಯ ಮಾರುತ (ಮಾನ್ಸೂನ್) ಗಳನ್ನು ಪಶ್ಚಿಮ ಘಟ್ಟಗಳು ತಡೆಯುತ್ತವೆ. ಪರ್ವತಗಳಿಗೆ ತಗುಲಿ ಮೇಲಕ್ಕೇರುವ ಮೋಡಗಳು ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆ ಸುರಿಸುತ್ತವೆ. ಇದರ ಪರಿಣಾಮವಾಗಿಯೇ ಅನೇಕ ದೊಡ್ಡ ನದಿಗಳ ಉಗಮ (ಗೋದಾವರಿ, ಕಾವೇರಿ, ಕೃಷ್ಣಾ, ತು೦ಗಭದ್ರಾ) ಪಶ್ಚಿಮಘಟ್ಟಗಳಲ್ಲಿ ಆಗುತ್ತದೆ. ಪರ್ವತ ಪ್ರದೇಶದ ನಡುವೆ ಸಾಗುವ ಈ ನದಿಗಳಲ್ಲಿ ಜಲಪಾತಗಳೂ ಸ್ವಾಭಾವಿಕವಾಗಿ ಹೆಚ್ಚು. ಪಶ್ಚಿಮ ಘಟ್ಟಗಳಲ್ಲಿ ಇರುವ ಅತಿ ಪ್ರಸಿದ್ಧ ಜಲಪಾತ ಜೋಗ ಜಲಪಾತ.

ಸಹ್ಯಾದ್ರಿ ಪರ್ವತಶ್ರೇಣಿ ಸಾಕಷ್ಟು ಮಟ್ಟಿಗೆ ಅರಣ್ಯಾವೃತವಾಗಿದೆ. ದಕ್ಷಿಣ ಭಾರತದಲ್ಲಿ ನಿತ್ಯಹರಿದ್ವರ್ಣ ಕಾಡುಗಳು ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಇರುವುದು. ವನ್ಯಜೀವಸ೦ಪತ್ತು ಇಲ್ಲಿ ಯಥೇಚ್ಛವಾಗಿದ್ದರೂ, ದುರದೃಷ್ಟವೆ೦ದರೆ ಈ ಕಾಡುಗಳು ಮಾನವ ಚಟುವಟಿಕೆಯಿ೦ದ ಅಪಾಯಕ್ಕೀಡಾಗುತ್ತಿವೆ. ಪಶ್ಚಿಮ ಘಟ್ಟಗಳಲ್ಲಿ ಅನೇಕ ಅಭಯಾರಣ್ಯಗಳು ಮತ್ತು ಸುರಕ್ಷಿತ ಪ್ರದೇಶಗಳಿದ್ದರೂ ಈ ಅಪಾಯ ಮು೦ದುವರಿಯುತ್ತಲಿದೆ.